ರಾಮಸ್ವಾಮಿ ಮೊದಲಿಯಾರ್, ಆರ್ಕಾಟ್
1887-? ಹಿಂದಿನ ಮೈಸೂರು ರಾಜ್ಯದ ಕೊನೆಯ ದಿವಾನರು. ಅರ್ಕಾಟ್ ಕುಪ್ಪುಸ್ವಾಮಿ ಮೊದಲಿಯಾರರ ಅವಳಿ ಮಕ್ಕಳಲ್ಲಿ ಹಿರಿಯರು. ಇವರ ತಮ್ಮ ಲಕ್ಷ್ಮಣಸ್ವಾಮಿ ಮೊದಲಿಯಾರ್ ಆರ್ಕಾಟ್ (ನೋಡಿ- ಆರ್ಕಾಟ್). ಮೊದಲಿಯಾರರು 1887 ಅಕ್ಟೋಬರ್ 14ರಂದು ಜನಿಸಿದರು. ಮದರಾಸಿನ ಕ್ರಿಶ್ಚಿಯನ್ ಕಾಲೇಜು, ಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ಮದರಾಸು ಉಚ್ಚನ್ಯಾಯಾಲಯದಲ್ಲಿ ವಕೀಲರಾಗಿ ಉದ್ಯೋಗ ಆರಂಭಿಸಿದರು.

ಭಾರತ ಸ್ವಾತಂತ್ರ್ಯ ಹೊಂದಿದ ಕಾಲದಲ್ಲಿ ಇವರು ಮೈಸೂರಿನ ದಿವಾನರಾಗಿದ್ದರು (1946-49). ಮೈಸೂರಿಗೆ ಜವಾಬ್ದಾರಿ ಸರ್ಕಾರವನ್ನು ತರಲು ಇವರು ವಿಳಂಬ ಮಾಡುತ್ತಿರುವರೆಂದು ಮೈಸೂರು ಕಾಂಗ್ರೆಸ್ ಸಮಿತಿ 1947 ಮೇ 1ರಂದು ಸತ್ಯಾಗ್ರಹ ಮಾಡಲು ನಿರ್ಧರಿಸಿದಾಗ ಸಂಧಾನದ ಮೂಲಕ ಸಂದಿಗ್ಧ ಪರಿಸ್ಥಿತಿಯನ್ನು ನಿವಾರಿಸಿದರು. ಇವರು ದಿವಾನರಾಗಿದ್ದಾಗ ಬೆಂಗಳೂರು ಕಂಟೋನ್‍ಮೆಂಟ್ ಭಾಗ (ದಂಡು ಪ್ರದೇಶ) ಮೈಸೂರು ಮಹಾರಾಜರಿಗೆ ಹಿಂದಿರುಗಿಸಲ್ಪಟ್ಟು 1947 ಜುಲೈ 26 ರಂದು ರೆಸಿಡೆಂಟ್ ಹುದ್ದೆ ರದ್ದಾಯಿತು. ವೈಸರಾಯ್ ಲಾರ್ಡ್ ಮೌಂಟ್‍ಬ್ಯಾಟನ್ 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯವನ್ನು ಘೋಷಿಸಿ ಸಂವಿಧಾನ ಸಭೆಯನ್ನು ರಚಿಸಿದಾಗ ಮೊದಲಿಯಾರರು ಮೈಸೂರಿನ ಪರವಾಗಿ ಏಳುಮಂದಿ ಪ್ರತಿನಿಧಿಗಳನ್ನು ಕಳುಹಿಸಿದರು. ಮೈಸೂರು ಸಂಸ್ಥಾನಕ್ಕೆ ಜವಾಬ್ದಾರಿ ಸರ್ಕಾರ ಮತ್ತು ಸಂವಿಧಾನ ರಚನೆಗೆ ಮೈಸೂರಿಗೆ ಸಂಬಂಧಪಟ್ಟ ಹಾಗೆ ಸಂವಿಧಾನ ರಚನಾ ಸಭೆಯನ್ನು ಏರ್ಪಡಿಸುವ ಬಗ್ಗೆ ಮೈಸೂರು ಕಾಂಗ್ರೆಸ್ ಒತ್ತಾಯಮಾಡಿ ಅರಮನೆ ಸತ್ಯಾಗ್ರಹವನ್ನು ಹೂಡಿತು; ಜನರ ಜಾತಾ ಮೈಸೂರು ನಗರದ ಕಡೆ ಹೊರಟಿತು. ಮೊದಲಿಯಾರರ ವಿರುದ್ಧ `ಆರ್ಕಾಟ್ ಬಾಯ್ಕಾಟ್ ಘೋಷಣೆಗಳಾದವು. ಜಯಚಾಮರಾಜ ಒಡೆಯರು 1947 ಸೆಪ್ಟೆಂಬರ್ 7ರಂದು ಮೈಸೂರು ಸಂಸ್ಥಾನಕ್ಕೆ ಜವಾಬ್ದಾರಿ ಸರ್ಕಾರವನ್ನು ಘೋಷಿಸಿದ ತರುವಾಯ 1949ರ ಆಗಸ್ಟ್‍ನಲ್ಲಿ ದಿವಾನರ ಹುದ್ದೆ ರದ್ದಾಯಿತು. ಮೈಸೂರು ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ರೆಡ್ಡಿಯವರು ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾದರು.

ಬ್ರಿಟಿಷರ ಆಳ್ವಿಕೆಯಲ್ಲಿ ಮೊದಲಿಯಾರರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂಡಿಯಾ ಸರ್ಕಾರದ ಶಿಕ್ಷಣ ಮಂತ್ರಿಯ ಕಾರ್ಯದರ್ಶಿ (1920-23), ಮದರಾಸು ನಗರಸಭೆ ಮೇಯರ್ (1928-30), `ಕೌನ್ಸಿಲ್ ಆಫ್ ಸ್ಟೇಟ್, ಪರಿಷತ್ತಿನ ಸದಸ್ಯ (1930). ಬ್ರಿಟಿಷ್ ಇಂಡಿಯಾ ಶಾಸನ ಸಭೆಯ ಸದಸ್ಯ (1934) ಶಾಸನ ಪರಿಷತ್ತಿನ ಸದಸ್ಯ (1936-37). ಸಂಸ್ಥಾನಗಳ ಆಡಳಿತದ ಕಾರ್ಯದರ್ಶಿಯ ಸಲಹಾಧಿಕಾರಿ (1937-39), ಗೌರ್ನರ್ ಜನರಲ್‍ರವರ ಆಡಳಿತ ಪರಿಷತ್ತಿನ ವಾಣಿಜ್ಯ ಸದಸ್ಯ ಆಗಿದ್ದರು (1939-42). ಬ್ರಸೆಲ್ಸ್ ನಗರದಲ್ಲಿ ನಡೆದ ನವರಾಷ್ಟ್ರಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಇವರು ಭಾಗವಹಿಸಿದ್ದರು (1937). ಎರಡನೆಯ ಮಹಾಯುದ್ಧ ಕಾಲದಲ್ಲಿ ಲಂಡನ್ನಿನ ಸಮರ ಸಮಾಲೋಚನೆಯ ಸಚಿವಮಂಡಲಿಯ ಹಾಗೂ ಪೆಸಿಫಿಕ್ ಸಾಗರ ವಿಭಾಗದ ಸಮರಸಭೆಯ ಭಾರತದ ಪರ ಪ್ರತಿನಿಧಿ ಆಗಿದ್ದರು (1942-43). ಲಂಡನ್ನಿನ ದುಂಡುಮೇಜಿನ ಸಮ್ಮೇಳನದ ಎಲ್ಲ ಅಧಿವೇಶನಗಳಲ್ಲಿ ಇವರು ಸದಸ್ಯರಾಗಿದ್ದರು.  ಟೊರೆಂಟೊದಲ್ಲಿ ನಡೆದ `ಬ್ರಿಟಿಷ್ ಕಾಮನ್‍ವೆಲ್ತ್ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಗಳ ಮುಖಂಡರಾಗಿ ಭಾಗವಹಿಸಿದ್ದರು. ಎರಡನೆಯ ಮಹಾಯುದ್ಧಕ್ಕೆ ಹಿಂದೆ ಲೀಗ್ ಆಫ್ ನೇಷನ್ಸ್ ಸಭೆಯ ಆರ್ಥಿಕ ಸಮಿತಿಯ ಸದಸ್ಯರೂ ಸಂಯುಕ್ತ ರಾಷ್ಟ್ರಸಂಸ್ಥೆಯ (ಯು.ಎನ್.) ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತಿನ ಅಧ್ಯಕ್ಷರೂ (1946-47) ಅದರ ಹಿರಿಯ ಉಪಾಧ್ಯಕ್ಷರೂ (1950-51) ಆಗಿದ್ದರು.

	ಇವರು ರಾಜ್ಯಸಭೆಯ ಸದಸ್ಯರೂ ಆಗಿದ್ದರು. ಸಂಯುಕ್ತ ರಾಷ್ಟ್ರಸಂಸ್ಥೆಯ ಸಮಿತಿ ಹಗೂ ಅಂತಾರಾಷ್ಟ್ರೀಯ ಸಿವಿಲ್‍ಸರ್ವಿಸ್ ಬೋರ್ಡ್‍ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು. ಕೆಲಕಾಲ ತಿರುವಾಂಕೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದರು. ಇವರು ಮದರಾಸಿನ `ಜಸ್ಟೀಸ್ ಪಾರ್ಟಿಯ ಸದಸ್ಯರಾಗಿದ್ದಾಗ ಕೆಲಕಾಲ (1927-35ರ ನಡುವೆ) `ಜಸ್ಟೀಸ್ ಪತ್ರಿಕೆಯ ಸಂಪಾದಕರಾಗಿದ್ದರು. ಇವರ ಗುರುತರ ಸೇವೆಯನ್ನು ಗಮನಿಸಿ ಇಂಗ್ಲೆಂಡ್ ದೊರೆ ಇವರಿಗೆ ಕೆ.ಸಿ.ಎಸ್.ಐ. (ಸ್ಟೇಟ್ ಕಮಾಂಡರ್ ಆಫ್ ದಿ ಸ್ಟಾರ್ ಆಫ್ ಇಂಡಿಯ) ಪದವಿ ನೀಡಿದ. ರಾವ್‍ಬಹದ್ದೂರ್ ಹಾಗೂ ಸರ್ ಪ್ರಶಸ್ತಿಗಳೂ ಇವರಿಗೆ ಲಭ್ಯವಾಗಿದ್ದವು.		  
(ವಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ